Monday, February 16, 2015

ಮಳೆ ಬರುವುದೋ ಬಿಡುವುದೋ , ಹೊಳೆ ಹರಿಸುವ ಜವಾಬ್ದಾರಿ ಸರ್ಕಾರದ್ದು!

ಚಳಿಗಾಲ ಮುಗಿದು ಬೇಸಿಗೆಯ ಬಿಸಿ ತಾಕಲೇ  ಇಲ್ಲ, ಆಗಲೇ ಜಿಲ್ಲೆಯ ಕೆರೆಗಳೆಲ್ಲ ಬತ್ತಿ ಬರುಡಾಗಿದೆ. ಅಂತರ್ಜಲ ಕುಸಿದು ಸತತವಾಗಿ ಕೊರೆಯಲಾಗುತ್ತಿರುವ ಬೋರ್-ವೆಲ್ ಗಳು ಭೂಮಿಗೆ ಗಾಯ ಮಾಡಿದೆಯೇ ಹೊರತು ನೀರು ಮಾತ್ರ ಸಿಗುತ್ತಿಲ್ಲ. ಚಿಂತಾಮಣಿ ನಗರದ ನೀರಿನ ಬೇಡಿಕೆಯನ್ನು ನಿಭಾಯಿಸಲು ಚಿಂತಾಮಣಿ ಮುನಿಸಿಪಾಲಿಟಿ ಹೆಣಗಾಡುತ್ತಿದೆ. ಹತ್ತು-ಹದಿನೈದು ದಿನಗಳಿಗೊಮ್ಮೆ ನೀರು ಬಿಟ್ಟು ಹೇಗೋ ಜನರ ನೀರಿನ ಅವಶ್ಯಕತೆಯನ್ನು ಪೂರೈಸಲು ಪರದಾಡುತ್ತಿದ್ದಾರೆ. ಟ್ರ್ಯಾಕ್ಟರ್- ಗಳಲ್ಲಿನ  ನೀರಿನ ಟ್ಯಾಂಕರ್ ಗಳು ಚಿಂತಾಮಣಿ ಜನರ ಪಾಲಿಗೆ ಸಧ್ಯಕ್ಕೆ Life-line ಆಗಿ ಪರಿಣಮಿಸಿದೆ. ಆದರೆ ಈ Life-line ಗಳಿಗೂ ಬೆಲೆ ತೆತ್ತಲೇ ಬೇಕು. ಬರುವ ದಿನಗಳಲ್ಲಿ  ಇದರ ಬೆಲೆಯೂ ದುಬಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಇನ್ನು, ನಮ್ಮ ಜಿಲ್ಲೆಯ ರೈತರ ಕಷ್ಟವಂತು ಶೋಚನೀಯ. ಬೋರ್ ಗಳು fail ಆಗಿ ನಿರೀಕ್ಷೆಯ ಬೆಳೆ ಬೆಳೆಯಲಾಗದೆ ರೈತರು ದೃತಿಗೆಟ್ಟಿದ್ದಾರೆ. ಕಾಲ-ಕಾಲಕ್ಕೆ ಮಳೆಗಳಾಗದೆ ರೈತನು ಆಗಸದ ಕಡೆ ಮುಖ ಮಾಡಿ ಸೊರಗುತ್ತಿದ್ದಾನೆ. ಬಯಲುಸೀಮೆ ರೈತರು ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿದವರು. ಈ ನಾಡಿನಲ್ಲಿ ರಾಜ್ಯದ  ಬೇರೆಲ್ಲೂ ಇರದಷ್ಟು ಕೆರೆ-ಕುಂಟೆಗಳಿವೆ. ಮುಂಚಿನಿಂದಲೂ ಇದನ್ನೇ ಅವಲಂಬಿಸಿದ ರೈತರು ಇರುವ ಅಲ್ಪ ಸೌಕರ್ಯದಲ್ಲೇ ಹೆಚ್ಚು ಬೆಳೆಗಳನ್ನು ಬೆಳೆದು 'ಸೈ' ಎನಿಸಿಕೊಂಡಿರುವವರು. ಕಷ್ಟಪಟ್ಟು ಹಗಲು-ರಾತ್ರಿ ಎನ್ನದೆ ದುಡಿದು ವರ್ಷಕ್ಕೆ ಮೂರು-ನಾಲ್ಕು ಫಸಲುಗಳನ್ನು ತೆಗೆಯುವ ಸಾಮರ್ಥ್ಯ ಉಳ್ಳವರು. ನಮ್ಮ ರೈತರಲ್ಲಿ ಕೆಲವರು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜಮೀನನ್ನು ಲೀಜ್ ಗೆ, ಇಲ್ಲವೇ ಖರೀದಿಸಿ ಅತ್ಯುತ್ತಮ ಬೆಳೆಗಳನ್ನು ಬೆಳೆದು ಅಲ್ಲಿಯವರನ್ನು ಬೆರೆಗುಗೊಳಿಸಿದ ನಿದರ್ಶನಗಳಿವೆ. (ಸಾಮಾನ್ಯವಾಗಿ ಅಲ್ಲಿನ ರೈತರು ವರ್ಷಕ್ಕೊಮ್ಮೆ ಕಬ್ಬನ್ನು ಬಿತ್ತಿ ಕೈಕಟ್ಟಿ ಕೂರುವ ಪರಿಪಾಟದವರು).  ಸರ್ಕಾರದ ಕೆಲವು ಪ್ರತಿನಿಧಿಗಳು ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳುತ್ತರೆ. ಅದಕ್ಕೆ ಸಾಲ ಕೊಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ನೀರೇ ಇಲ್ಲದಿರುವಾಗ ಆಧುನಿಕ ತಂತ್ರಜ್ಞಾನದ ಯಂತ್ರಗಳು ಏನು ಮಾಡೀತು ? There's no alternate for water. 
ಜಾನುವಾರುಗಳಿಗೆ ನೀರಿಲ್ಲದೆ ಒದ್ದಾಡುವ ಪರಿಸ್ಥಿತಿ. ನಮ್ಮ ನಾಡು ಹಾಲು ಉತ್ಪಾದನೆಯಲ್ಲಿ (milk & silk) ಮೇಲುಗೈ ಸಾಧಿಸಿದ ನಾಡು. ಹಸುಗಳಿಗೆ ನೀರು ಒದಗಿಸಲು ನಮ್ಮ ರೈತರು ಪಡುವ ಪಾಡು ಹೇಳತೀರದು. IT ಕಂಪನಿಗಳ ಮಾಲೀಕರು ಕೆಮ್ಮಿದರೇ ಸಾಕು ಕಂಗಾಲಾಗುವ ಸರ್ಕಾರಗಳು ನಮ್ಮ ರೈತರ ಕಷ್ಟಕ್ಕೆ ಏಕೆ ಸ್ಪಂದಿಸುವ ಇಚ್ಛೆ ತೋರುತ್ತಿಲ್ಲ? IT ಕಂಪನಿಗಳಿಗೇನು..... ಇಲ್ಲಿ ಅಲ್ಲದಿದ್ದರೆ ಅಲ್ಲಿ, ಅಲ್ಲಿಯೂ ಅಲ್ಲದಿದ್ದರೆ ಇನ್ನೆಲ್ಲೋ! ಸಮಯ ಬಂದರೆ ದೇಶ ತೊರೆದು ಬೇರೆ ದೇಶಕ್ಕೆ ಹೋಗಿ ಘಂಟೆ ಬಾರಿಸುವ (pun intended - ringing the bell at the stock exchanges  ) ನಿಪುಣ ವ್ಯಾಪಾರಿಗಳು. ಆದರೆ ನಮ್ಮ ರೈತರು ಮಾತ್ರ ಪ್ರತಿನಿಧಿಗಳಿಗೆ -  "ಸಂಕಟ ಬಂದಾಗ ವೆಂಕಟರಮಣ, ಎಂದ ಹಾಗೆ ...ಎಲೆಕ್ಷನ್ ಬಂದಾಗ ಎಂಟ್ರೋಣಪ್ಪ  !"


  
"ಮಳೆ ಬಾರದಿದ್ದರೆ ಏನು ಮಾಡುವುದು...?", ಎಂಬ ನಿಲುವು ತಾಳಿ ಸರ್ಕಾರ ಕೈಚೆಲ್ಲಬಾರದು! ಬೆಂಗಳೂರು ಮಹಾ'ನಗರಕ್ಕೆ ದೂರದ ಮೈಸೂರಿನಿಂದ ಮತ್ತು ತಿಪ್ಪಗೊಂಡನ ಹಳ್ಳಿಯಿಂದ ಪೈಪ್ ಗಳಲ್ಲಿ ನೀರು ಹರಿಸಿ ಅಲ್ಲಿನ ಜನರಿಗೆ ನೀರು ಒದಗಿಸುತ್ತಿಲ್ಲವೇ? ಕರ್ನಾಟಕದ ಕೆಲವು ಭಾಗಗಳ ಕೆರೆಗಳಿಗೆ ಕಾಲುವೆ/ಚ್ಯಾನೆಲ್ ಗಳನ್ನು ಮಾಡಿ ಆಗಿಂದಾಗ್ಗೆ ಆ ಕೆರೆಗಳನ್ನು ತುಂಬಿಸುತ್ತಿಲ್ಲವೇ? 
Dr G.S ಪರಮಶಿವಯ್ಯ ನವರು ಬಯಲುಸೀಮೆಯ ಜನರ ದುಗುಡವನ್ನು ಅರಿತು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಹಲವು ವರ್ಷಗಳಾಗಿದೆ. ಇಲ್ಲಿನ ಜನರಿಂದಲೇ ಆಯ್ಕೆಯಾದ ಜನ ಪ್ರತಿನಿಧಿಗಳು ಕಂಕಣ ತೊಟ್ಟು ನಿಂತರೆ, Dr  G.S. ಪರಮಶಿವಯ್ಯನವರ ವರದಿ ಜಾರಿಗೊಳ್ಳುವುದರಲ್ಲಿ ಸಂದೇಹವೇ ಇಲ್ಲ, ನೀರಿನ ಸಮಸ್ಯೆ ಬಗೆಹರಿಯದೆ ಉಳಿಯುವಂತದ್ದಲ್ಲ!
People can live without love, but none can live without water.
ಶಾಶ್ವತ ನೀರಾವರಿ ಹೋರಾಟಕ್ಕೆ ಜಯವಾಗಲಿ!
November 2014
          

No comments: