Monday, March 16, 2015

ವಿವಿಧ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ

ತಾರೀಖು 13 ಮಾರ್ಚ್, ಶುಕ್ರವಾರದಂದು ಬೆಳಿಗ್ಗೆ10:30 ಕ್ಕೆ ಚಿಂತಾಮಣಿಯ ಆಜ್ಹಾದ್ - ಚೌಕದಿಂದ  ಹೊರಟ ಪ್ರತಿಭಟನಾ ಮೆರವಣಿಗೆಯು ಸರ್ಕಾರದ ನಿರ್ಲಿಪ್ತತೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜನರ ನೀರಿನ  ಬವಣೆಯ ಅಳಲನ್ನು ವ್ಯಕ್ತಪಡಿಸಿದರು. ಇಪ್ಪತ್ತು ದಿನಗಳಿಂದ, ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ,  ಸತತವಾಗಿ ಧರಣಿ ನಡೆಸುತ್ತಿದ್ದ ಹಲವಾರು ಸಂಘಟನೆಗಳು, ಶಾಶ್ವತ  ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಕಾರ್ಯಕರ್ತರು , ಸರ್ಕಾರದ ಗಮನ ಸೆಳೆದು, ಮತ್ತು ಜನರಿಗೆ ರೈತರ ಕಷ್ಟದ ತೀವ್ರತೆಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಮಧ್ಯಾಹ್ನದವರೆಗು ಬಂದ್ ಮಾಡಿ ವ್ಯಾಪಾರಸ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಜನರ ಈ ಆಕ್ರೋಶವನ್ನು ಮನಗಂಡ  ಸಂಸತ್ ಸದಸ್ಯರಾದ K.H ಮುನಿಯಪ್ಪನವರು ಧರಣಿ ಸ್ಥಳಕ್ಕೆ ಆಗಮಿಸಿ ಜನರಿಗೆ ಭರವಸೆ ಹಾಗು ಆಶ್ವಾಸನೆ ಕೊಡಲು ಬಂದಿದ್ದರು. ಆದರೆ ಜನರ ಆಕ್ರೋಶದ ಮಾತುಗಳ ಮಧ್ಯೆ ಅವರ ಧನಿ ಕುಗ್ಗಿತು. ಅವರ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಅಲ್ಲಿಂದ ಜಾಗ ಖಾಲಿ ಮಾಡಬೇಕಾಯಿತು. "ನೀರು ಕೊಡಿ, ಇಲ್ಲವಾದಲ್ಲಿ ವಿಧಾನ ಸೌಧವನ್ನೇ ಮುಚ್ಚಿ" ಎಂಬ ಕೂಗು ಕೇಳಿಬಂತು. 
ಜನರಿಗೆ ಇನ್ನು ಆಶ್ವಾಸನೆಗಳು ಭಾಷಣಗಳು ಬೇಕಿಲ್ಲ. ರಾಜಕೀಯ ಪಕ್ಷಗಳ ಚುನಾವಣೆ ಸಮಯದ ಮರಳು ಮಾಡಿಸುವ, ಮೋಡಿ ಮಾಡುವ ನೀರ್ಗುಳ್ಳೆಯ ಭರವಸೆಗಳು ಬೇಕಿಲ್ಲ. ಸಮಾಜವನ್ನು ಒಡೆಯುವ ದುರುದ್ದೇಶದ ಸರ್ಕಾರಿ ಸವಲತ್ತುಗಳು ಬೇಕಿಲ್ಲ. ಮೋಸಕ್ಕೆ ಎಡೆ ಮಾಡುವ  ಜನಪ್ರಿಯ ಕೊಡುಗೆಗಳು ಬೇಕಿಲ್ಲ. ತೀರ್ಥ ಯಾತ್ರೆಗಳಿಗೆ ಸೌಕರ್ಯ ಬೇಕಿಲ್ಲ. ಮಠ, ಮಂದಿರ, ಮಸೀದಿಗಳಿಗೆ ಅನುದಾನ ಬೇಕಿಲ್ಲ. ಜನರಿಗೆ ಬೇಕಿರುವುದು ಮೂಲಭೂತ ಸೌಕರ್ಯ!! ಸ್ವತಂತ್ರ ಬಂದು ಆರು ದಶಕಗಳಾದರೂ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲದಿರುವುದು ವಿಪರ್ಯಾಸ. ಸಾವಿರಾರು ಕೋಠಿ ರೂಪಾಯಿಗಳು ಹಗರಣಗಳಲ್ಲಿ ಮಾಯವಾಗಿದೆ. ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳದೆ ಸುಮ್ಮನೆ ಚುನಾವಣೆ ಗೆಲ್ಲುವುದೇ ಮುಖ್ಯ ಆದ್ಯತೆ ಆಗಿಹೋಗಿದೆ. ಎಷ್ಟೋ ರಾಷ್ಟ್ರಗಳಲ್ಲಿ ಬರ ಪ್ರದೇಶವಾಗಿದ್ದರೂ, ಯತೇಚ್ಚವಾಗಿ ನೀರು ಸಿಗುವ ಯೋಜನೆಗಳನ್ನು ಹಾಕಿ ಪೂರ್ತಿಗೊಳಿಸುತ್ತಾರೆ. ಹೊರ ರಾಷ್ಟ್ರಗಳೇಕೆ, ಪಕ್ಕದ ಸೀಮಾಂದ್ರ ಹಾಗು ತೆಲೆಂಗಣ ರಾಜ್ಯಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ದೊಡ್ಡ ಪ್ರಮಾಣದಲ್ಲಿ ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತರಾಗಿದ್ದರೆ. ತಮಿಳುನಾಡಿನ ಮುಖ್ಯಮಂತ್ರಿಗೆ ಸದಾ ಕಾವೇರಿಯ ಮೇಲೇ ಕಣ್ಣು. ಅಲ್ಲಿನ ಮುಖ್ಯಮಂತ್ರಿಗಳ ನೀರಿನ ಸಂಕಷ್ಟದ ಸ್ಪಂದನೆ ಜಗಜ್ಜಾಹಿತ. see the link here https://www.youtube.com/watch?v=TkRkLgSkuzg ,  ನಮ್ಮ ರಾಜ್ಯದಲ್ಲಿ  ಯೋಜನೆಗಳೇನು..... ಅದರ ವರದಿಗಳೇನು......ಪುನಃ ಪರಿಶೀಲನೆಗಳೇನು.... ಇದರಲ್ಲೇ ವರ್ಷಗಳು ಕಳೆದು ಬೊಕ್ಕಸ ಖಾಲಿಯಾಗುತ್ತಿದೆ, ವರದಿಗಳಿಗೆ ಜೇಡ ಕಟ್ಟುತ್ತಿದೆ.






ನೀರು ಬಹುಮುಖ್ಯವಾದದ್ದು. ಶುದ್ಧವಾದ ಕುಡಿಯುವ ನೀರಿಲ್ಲದಿದ್ದರೆ ರೋಗಗಳು ಬಂದು ಜನರ ಹಣವೆಲ್ಲಾ ಸುಶ್ರೂಶೆಗೆ ಖ್ಹರ್ಚಾಗುತ್ತದೆ. ಸಮಾಜದ ಆರೋಗ್ಯವನ್ನೇ ಕೆಡಿಸುತ್ತದೆ. ರೈತರು ಕಂಗಾಲಾಗಿ ಉಳುಮೆಯನ್ನು ಬಿಟ್ಟು ನಗರ ಪ್ರದೇಶಗಳನ್ನು ಸೇರುತ್ತಾರೆ. ಇದರಿಂದಲೇ ದೊಡ್ಡ ನಗರಗಳಲ್ಲಿ ಜನ ದಟ್ಟಣೆ ಹೆಚ್ಚುತ್ತಿದೆ. ಸಮರ್ಪಕ ನೀರಿನ ಸರಬರಾಜಿನಿಂದ ನಾಡಿನ ರೂಪು-ರೇಷ ಗಳು ಸಂಪೂರ್ಣ  ಬದಲಾಗುತ್ತದೆ. ಸರ್ವತೋಮುಖ ಅಭಿವೃದ್ಧಿಯಾಗುತ್ತದೆ .
ಕರ್ಣಾಟಕದ ಇಬ್ಬರೇ 'ಭಾರತರತ್ನ' ರನ್ನು,  Sir M. ವಿಶ್ವೇಶ್ವರಯ್ಯ ಮತ್ತು Prof.  CNR ರಾವ್,  ನೀಡಿದ ಜಿಲ್ಲೆಯನ್ನು ಸರ್ಕಾರ ಏಕೆ ನಿರ್ಲಕ್ಷಿಸುತ್ತಿದೆಯೊ ತಿಳಿಯದಾಗಿದೆ. ಇಲ್ಲಿನ ಜನಪ್ರತಿನಿಧಿಗಳ ನಿಶ್ಕ್ರಿಯ ಮನೋಭಾವ ಬೇಸರ, ಅಸಹ್ಯ ಮತ್ತು ಆಕ್ರೋಷ ಎಲ್ಲವೂ ಒಮ್ಮೆಲೇ ಹುಟ್ಟಿಸುತ್ತದೆ. ತಮ್ಮ ಪಕ್ಷಕ್ಕಿಂತ, ಕೂತಿರುವ ಪದವಿಯ ಖೂರ್ಚಿಗಿಂತ ತಮ್ಮನ್ನು ಆಯ್ಕೆ ಮಾಡಿದ ಜನರೇ ಎಲ್ಲಕ್ಕಿಂತಲೂ ಮುಖ್ಯ ಎಂದು ಅರಿತರೆ ಈ ತರಹದ ಸಂಕಷ್ಟ ಒದಗುತ್ತಿರಲಿಲ್ಲ, ಜನರು ನೀರಿಗೂ ಹೊರಡುವಂತ ಪರಿಸ್ತಿತಿ ಬರುತ್ತಿರಲಿಲ್ಲ, ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ.    

Monday, February 16, 2015

ಮಳೆ ಬರುವುದೋ ಬಿಡುವುದೋ , ಹೊಳೆ ಹರಿಸುವ ಜವಾಬ್ದಾರಿ ಸರ್ಕಾರದ್ದು!

ಚಳಿಗಾಲ ಮುಗಿದು ಬೇಸಿಗೆಯ ಬಿಸಿ ತಾಕಲೇ  ಇಲ್ಲ, ಆಗಲೇ ಜಿಲ್ಲೆಯ ಕೆರೆಗಳೆಲ್ಲ ಬತ್ತಿ ಬರುಡಾಗಿದೆ. ಅಂತರ್ಜಲ ಕುಸಿದು ಸತತವಾಗಿ ಕೊರೆಯಲಾಗುತ್ತಿರುವ ಬೋರ್-ವೆಲ್ ಗಳು ಭೂಮಿಗೆ ಗಾಯ ಮಾಡಿದೆಯೇ ಹೊರತು ನೀರು ಮಾತ್ರ ಸಿಗುತ್ತಿಲ್ಲ. ಚಿಂತಾಮಣಿ ನಗರದ ನೀರಿನ ಬೇಡಿಕೆಯನ್ನು ನಿಭಾಯಿಸಲು ಚಿಂತಾಮಣಿ ಮುನಿಸಿಪಾಲಿಟಿ ಹೆಣಗಾಡುತ್ತಿದೆ. ಹತ್ತು-ಹದಿನೈದು ದಿನಗಳಿಗೊಮ್ಮೆ ನೀರು ಬಿಟ್ಟು ಹೇಗೋ ಜನರ ನೀರಿನ ಅವಶ್ಯಕತೆಯನ್ನು ಪೂರೈಸಲು ಪರದಾಡುತ್ತಿದ್ದಾರೆ. ಟ್ರ್ಯಾಕ್ಟರ್- ಗಳಲ್ಲಿನ  ನೀರಿನ ಟ್ಯಾಂಕರ್ ಗಳು ಚಿಂತಾಮಣಿ ಜನರ ಪಾಲಿಗೆ ಸಧ್ಯಕ್ಕೆ Life-line ಆಗಿ ಪರಿಣಮಿಸಿದೆ. ಆದರೆ ಈ Life-line ಗಳಿಗೂ ಬೆಲೆ ತೆತ್ತಲೇ ಬೇಕು. ಬರುವ ದಿನಗಳಲ್ಲಿ  ಇದರ ಬೆಲೆಯೂ ದುಬಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಇನ್ನು, ನಮ್ಮ ಜಿಲ್ಲೆಯ ರೈತರ ಕಷ್ಟವಂತು ಶೋಚನೀಯ. ಬೋರ್ ಗಳು fail ಆಗಿ ನಿರೀಕ್ಷೆಯ ಬೆಳೆ ಬೆಳೆಯಲಾಗದೆ ರೈತರು ದೃತಿಗೆಟ್ಟಿದ್ದಾರೆ. ಕಾಲ-ಕಾಲಕ್ಕೆ ಮಳೆಗಳಾಗದೆ ರೈತನು ಆಗಸದ ಕಡೆ ಮುಖ ಮಾಡಿ ಸೊರಗುತ್ತಿದ್ದಾನೆ. ಬಯಲುಸೀಮೆ ರೈತರು ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿದವರು. ಈ ನಾಡಿನಲ್ಲಿ ರಾಜ್ಯದ  ಬೇರೆಲ್ಲೂ ಇರದಷ್ಟು ಕೆರೆ-ಕುಂಟೆಗಳಿವೆ. ಮುಂಚಿನಿಂದಲೂ ಇದನ್ನೇ ಅವಲಂಬಿಸಿದ ರೈತರು ಇರುವ ಅಲ್ಪ ಸೌಕರ್ಯದಲ್ಲೇ ಹೆಚ್ಚು ಬೆಳೆಗಳನ್ನು ಬೆಳೆದು 'ಸೈ' ಎನಿಸಿಕೊಂಡಿರುವವರು. ಕಷ್ಟಪಟ್ಟು ಹಗಲು-ರಾತ್ರಿ ಎನ್ನದೆ ದುಡಿದು ವರ್ಷಕ್ಕೆ ಮೂರು-ನಾಲ್ಕು ಫಸಲುಗಳನ್ನು ತೆಗೆಯುವ ಸಾಮರ್ಥ್ಯ ಉಳ್ಳವರು. ನಮ್ಮ ರೈತರಲ್ಲಿ ಕೆಲವರು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜಮೀನನ್ನು ಲೀಜ್ ಗೆ, ಇಲ್ಲವೇ ಖರೀದಿಸಿ ಅತ್ಯುತ್ತಮ ಬೆಳೆಗಳನ್ನು ಬೆಳೆದು ಅಲ್ಲಿಯವರನ್ನು ಬೆರೆಗುಗೊಳಿಸಿದ ನಿದರ್ಶನಗಳಿವೆ. (ಸಾಮಾನ್ಯವಾಗಿ ಅಲ್ಲಿನ ರೈತರು ವರ್ಷಕ್ಕೊಮ್ಮೆ ಕಬ್ಬನ್ನು ಬಿತ್ತಿ ಕೈಕಟ್ಟಿ ಕೂರುವ ಪರಿಪಾಟದವರು).  ಸರ್ಕಾರದ ಕೆಲವು ಪ್ರತಿನಿಧಿಗಳು ರೈತರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳುತ್ತರೆ. ಅದಕ್ಕೆ ಸಾಲ ಕೊಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ನೀರೇ ಇಲ್ಲದಿರುವಾಗ ಆಧುನಿಕ ತಂತ್ರಜ್ಞಾನದ ಯಂತ್ರಗಳು ಏನು ಮಾಡೀತು ? There's no alternate for water. 
ಜಾನುವಾರುಗಳಿಗೆ ನೀರಿಲ್ಲದೆ ಒದ್ದಾಡುವ ಪರಿಸ್ಥಿತಿ. ನಮ್ಮ ನಾಡು ಹಾಲು ಉತ್ಪಾದನೆಯಲ್ಲಿ (milk & silk) ಮೇಲುಗೈ ಸಾಧಿಸಿದ ನಾಡು. ಹಸುಗಳಿಗೆ ನೀರು ಒದಗಿಸಲು ನಮ್ಮ ರೈತರು ಪಡುವ ಪಾಡು ಹೇಳತೀರದು. IT ಕಂಪನಿಗಳ ಮಾಲೀಕರು ಕೆಮ್ಮಿದರೇ ಸಾಕು ಕಂಗಾಲಾಗುವ ಸರ್ಕಾರಗಳು ನಮ್ಮ ರೈತರ ಕಷ್ಟಕ್ಕೆ ಏಕೆ ಸ್ಪಂದಿಸುವ ಇಚ್ಛೆ ತೋರುತ್ತಿಲ್ಲ? IT ಕಂಪನಿಗಳಿಗೇನು..... ಇಲ್ಲಿ ಅಲ್ಲದಿದ್ದರೆ ಅಲ್ಲಿ, ಅಲ್ಲಿಯೂ ಅಲ್ಲದಿದ್ದರೆ ಇನ್ನೆಲ್ಲೋ! ಸಮಯ ಬಂದರೆ ದೇಶ ತೊರೆದು ಬೇರೆ ದೇಶಕ್ಕೆ ಹೋಗಿ ಘಂಟೆ ಬಾರಿಸುವ (pun intended - ringing the bell at the stock exchanges  ) ನಿಪುಣ ವ್ಯಾಪಾರಿಗಳು. ಆದರೆ ನಮ್ಮ ರೈತರು ಮಾತ್ರ ಪ್ರತಿನಿಧಿಗಳಿಗೆ -  "ಸಂಕಟ ಬಂದಾಗ ವೆಂಕಟರಮಣ, ಎಂದ ಹಾಗೆ ...ಎಲೆಕ್ಷನ್ ಬಂದಾಗ ಎಂಟ್ರೋಣಪ್ಪ  !"


  
"ಮಳೆ ಬಾರದಿದ್ದರೆ ಏನು ಮಾಡುವುದು...?", ಎಂಬ ನಿಲುವು ತಾಳಿ ಸರ್ಕಾರ ಕೈಚೆಲ್ಲಬಾರದು! ಬೆಂಗಳೂರು ಮಹಾ'ನಗರಕ್ಕೆ ದೂರದ ಮೈಸೂರಿನಿಂದ ಮತ್ತು ತಿಪ್ಪಗೊಂಡನ ಹಳ್ಳಿಯಿಂದ ಪೈಪ್ ಗಳಲ್ಲಿ ನೀರು ಹರಿಸಿ ಅಲ್ಲಿನ ಜನರಿಗೆ ನೀರು ಒದಗಿಸುತ್ತಿಲ್ಲವೇ? ಕರ್ನಾಟಕದ ಕೆಲವು ಭಾಗಗಳ ಕೆರೆಗಳಿಗೆ ಕಾಲುವೆ/ಚ್ಯಾನೆಲ್ ಗಳನ್ನು ಮಾಡಿ ಆಗಿಂದಾಗ್ಗೆ ಆ ಕೆರೆಗಳನ್ನು ತುಂಬಿಸುತ್ತಿಲ್ಲವೇ? 
Dr G.S ಪರಮಶಿವಯ್ಯ ನವರು ಬಯಲುಸೀಮೆಯ ಜನರ ದುಗುಡವನ್ನು ಅರಿತು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಹಲವು ವರ್ಷಗಳಾಗಿದೆ. ಇಲ್ಲಿನ ಜನರಿಂದಲೇ ಆಯ್ಕೆಯಾದ ಜನ ಪ್ರತಿನಿಧಿಗಳು ಕಂಕಣ ತೊಟ್ಟು ನಿಂತರೆ, Dr  G.S. ಪರಮಶಿವಯ್ಯನವರ ವರದಿ ಜಾರಿಗೊಳ್ಳುವುದರಲ್ಲಿ ಸಂದೇಹವೇ ಇಲ್ಲ, ನೀರಿನ ಸಮಸ್ಯೆ ಬಗೆಹರಿಯದೆ ಉಳಿಯುವಂತದ್ದಲ್ಲ!
People can live without love, but none can live without water.
ಶಾಶ್ವತ ನೀರಾವರಿ ಹೋರಾಟಕ್ಕೆ ಜಯವಾಗಲಿ!
November 2014